ಅಗ್ರಶೀರ್ಷಿಕೆ

 ವೃತ್ತಪತ್ರಿಕೆಗಳಲ್ಲಿ ಬಹು ಮುಖ್ಯವೆಂದು ಕಂಡುಬಂದ ಸುದ್ದಿಗಳಿಗೆ ಒಂದೊಂದಕ್ಕೂ ಒಂದೊಂದು ಶೀರ್ಷಿಕೆ ಇರುತ್ತದೆಯಾದರೂ ಎಲ್ಲ ಸುದ್ದಿಗಳನ್ನೂ ಮೀರಿಸಿದ ಬಿಸಿ ಬಿಸಿ ಸುದ್ದಿಗೆ ಸಾಮಾನ್ಯ ಶೀರ್ಷಿಕೆಗಿಂತ ಮುಖ್ಯವಾದ ದೊಡ್ಡಕ್ಷರದ ಶೀರ್ಷಿಕೆ ಅಗತ್ಯವಾಗುತ್ತದೆ. ಅದನ್ನು ಅಗ್ರಶೀರ್ಷಿಕೆ ಎನ್ನುತ್ತಾರೆ. ಸಾಮಾನ್ಯವಾಗಿ ಇದು ಪತ್ರಿಕೆಯ ಮೊದಲ ಪುಟದ ಮೊದಲ ಸಾಲಿನಲ್ಲಿ ಅತಿದೊಡ್ಡ ಅಕ್ಷರಗಳಲ್ಲಿರುತ್ತದೆ. ಅದರ ಕೆಳಗಡೆ ವಿಷಯಕ್ಕೆ ಸಂಬಂಧಪಟ್ಟ ಶೀರ್ಷಿಕೆ ಉಪಶೀರ್ಷಿಕೆ ವಿಷಯಸಾರಾಂಶ ಅನಂತರ ವಿಷಯದ ವಿವರಗಳು ಒಂದಕ್ಕಿಂತ ಒಂದು ಸಣ್ಣ ಅಕ್ಷರಗಳಲ್ಲಿ ಅಚ್ಚಾಗುತ್ತವೆ. ವಾಚಕರ ಗಮನವನ್ನು ಮೊಟ್ಟಮೊದಲಿಗೆ ತನ್ನ ಕಡೆ ಎಳೆಯುವ ಉದ್ದೇಶ ಅಗ್ರಶೀರ್ಷಿಕೆಯದು. ದರ ಗಾತ್ರವಷ್ಟೇ ದೊಡ್ಡದಾಗಿದ್ದರೆ ಸಾಲದು. ಅದರ ಒಕ್ಕಣೆ ಚಿಕ್ಕದಾಗಿ, ಕಣ್ಮನಗಳನ್ನು ಸೆಳೆವಂತಿದ್ದು ಗಂಭೀರವಾಗಿರಬೇಕಾದ್ದು ಅಷ್ಟೇ ಅಗತ್ಯ.    

(ಟಿ.ಟಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ